88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್ ಆಯ್ಕೆ
ಬಳ್ಳಾರಿಯಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬುಕ್ಕರ್ ಪ್ರಶಸ್ತಿಗೆ ಭಾಜನರಾಗಿದ್ದ ಬಾನು ಮುಷ್ತಾಕ್ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯು ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಂಡಿದೆ. ಬಾನು ಮುಷ್ತಾಕ್ ಅವರು ಈ ಆಯ್ಕೆಯನ್ನು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಸಮ್ಮೇಳನದಲ್ಲಿ 'ಎದೆಯ ಹಣತೆ' ಕೃತಿ ಅನುವಾದ ಮಾಡಿದ ದೀಪಾ ಬಾಸ್ತಿ ಅವರನ್ನೂ ಗೌರವಿಸಲಾಗುವುದು.

ಬಳ್ಳಾರಿ, ಜೂನ್ 29: ಡಿಸೆಂಬರ್‌ನಲ್ಲಿ ಬಳ್ಳಾರಿಯಲ್ಲಿ ನಡೆಯುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (Kannada Sahitya Sammelana) ಸರ್ವಾಧ್ಯಕ್ಷರಾಗಿ ಬೂಕರ್ ಪ್ರಶಸ್ತಿಗೆ (Booker Award) ಭಾಜನರಾಗಿದ್ದ ಬಾನು ಮುಷ್ತಾಕ್ (Banu Mushtaq) ಅವರನ್ನು ಆಯ್ಕೆ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎಲ್ಲ ಪದಾಧಿಕಾರಿಗಳ ಸರ್ವಾನುಮತದಿಂದ ಬಾನು ಮುಷ್ತಾಕ್ ಹೆಸರನ್ನು ಅಂತಿಮಗೊಳಿಸಲಾಗಿದೆ.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಮಹೇಶ್ ಜೋಶಿ, ಕನ್ನಡ ನಾಡು, ನುಡಿಯ ಹಿರಿಮೆಯನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದು, ಕನ್ನಡ ಭಾಷೆಯ ಸಾಮರ್ಥ್ಯ ಹಾಗೂ ಶಕ್ತಿಯನ್ನು ಜಗತ್ತಿಗೆ ತೋರಿಸಿದ, ಪ್ರತಿಷ್ಠಿತ ಬೂಕರ್ ಪ್ರಶಸ್ತಿಗೆ ಹೊಸ ಅರ್ಥ ತಂದವರು ಬಾನು ಮುಷ್ತಾಕ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದರೊಂದಿಗೆ ಎದೆಯ ಹಣತೆ ಕೃತಿಯನ್ನು ಅನುವಾದ ಮಾಡಿದ ದೀಪಾ ಬಾಸ್ತಿ ಅವರನ್ನು ಸಮ್ಮೇಳನದಲ್ಲಿ ಗೌರವಿಸಲಾಗುತ್ತದೆ ಎಂದರು.
ಸಾಹಿತ್ಯ ಪರಿಷತ್ನ ಕಾರ್ಯಕಾರಿ ಸಮಿತಿಯು ಲೇಖಕಿ ಬಾನು ಮುಷ್ತಾಕ್ ಅವರನ್ನು ಸರ್ವಾನುಮತದಿಂದ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದೆ. ಈ ಆಯ್ಕೆಯನ್ನು ಸಾಹಿತಿ ಬಾನು ಮುಷ್ತಾಕ್ ಅವರು ಅತ್ಯಂತ ಸಂತೋಷದಿಂದ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:11 pm, Sun, 29 June 25